ಪುಟಗಳು

ಸಂಧಿಗಳು

 ಕನ್ನಡ ಸಂಧಿಗಳು :

೧. ಲೋಪಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿ ಎಂದು ಹೆಸರು. 

ಉದಾ: 

ತುಪ್ಪಳದ + ಅಂತೆ = ತುಪ್ಪಳದಂತೆ - ಅ ಕಾರ ಲೋಪ

ಅಲ್ಲಿ + ಇದ್ದೇನೆ = ಅಲ್ಲಿದ್ದೇನೆ - ಇ ಕಾರ ಲೋಪ 

ಇವನು + ಒಬ್ಬ = ಇವನೊಬ್ಬ - ಉ ಕಾರ ಲೋಪ

ಬೆಳ್ಳಗೆ + ಆಗಿ = ಬೆಳ್ಳಗಾಗಿ - ಎ ಕಾರ ಲೋಪ

೨. ಆಗಮಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯದಲ್ಲಿ ‘ಯ್’ ಕಾರವನ್ನು ಅಥವಾ ‘ವ’ ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಆಗಮಸಂಧಿ.

ಉದಾ: 

ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ

ಭಾವನೆ + ಉಂಟಾಯಿತು = ಭಾವನೆಯುಂಟಾಯಿತು

ಗುರು + ಅನ್ನು = ಗುರುವನ್ನು

ಸ್ವಾರಸ್ಯ + ಇಲ್ಲ = ಸ್ವಾರಸ್ಯವಿಲ್ಲ

೩. ಆದೇಶಸಂಧಿ : ಉತ್ತರ ಪದದ ಆದಿಯಲ್ಲಿರುವ ಕ,ತ,ಪ ವ್ಯಂಜನಗಳಿಗೆ ಕ್ರಮವಾಗಿ ಗ,ದ,ಬ ವ್ಯಂಜನಗಳು ಆದೇಶವಾಗುವುವು. ಇದನ್ನು ಆದೇಶಸಂಧಿ ಎನ್ನುವರು. ಕೆಲವೊಮ್ಮೆ ಉತ್ತರ ಪದದ ಆದಿಯ ಪ್, ಬ್, ಮ್ ವ್ಯಂಜನಗಳಿಗೆ ‘ವ’ ಕಾರವು ಆದೇಶವಾಗುವುದು. 

ಉದಾ: 

ತುದಿ + ಕಾಲಲ್ಲಿ (ಕ್>ಗ್) = ತುದಿಗಾಲಲ್ಲಿ

ಹುಲಿ + ತೊಗಲು (ತ್>ದ್) = ಹುಲಿದೊಗಲು

ಕಣ್ + ಪನಿ (ಪ್>ಬ್) = ಕಂಬನಿ

ನೀರ್ + ಪನಿ (ಪ್>ವ್) = ನರ‍್ವನಿ

 ಕಡು + ಬೆಳ್ಪು (ಬ್>ವ್) = ಕಡುವೆಳ್ಪು

 ಮೆಲ್ + ಮಾತು (ಮ್>ವ್) = ಮೆಲ್ವಾತು

ನಮೂದಿತ ಎರಡು ವಾಕ್ಯಗಳಲ್ಲಿರುವ ರಾಮಾಯಣ, ಮಹೋನ್ನತ, ಗ್ರಂಥ, ಸರ‍್ಯೋದಯ, ದೃಶ್ಯ, 

ಅತ್ಯಂತ, ಮನೋಹರ - ಎಲ್ಲವೂ ಸಂಸ್ಕೃತ ಪದಗಳು. ಆದರೆ ಕನ್ನಡ ಪದಗಳೆಂದು ಪರಿಗಣಿಸಲ್ಪಟ್ಟಿವೆ. ಹೀಗೆ ಕನ್ನಡ ಭಾಷೆಗೆ ಸಂಸ್ಕೃತ ಪದಗಳು ಸೇರ್ಪಡೆಯಾಗಿವೆ. ಇಂತಹ ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತಸಂಧಿ ಎಂದು ಕರೆಯಲಾಗುತ್ತದೆ. ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು ಸ್ವರಸಂಧಿ. ಸ್ವರಕ್ಕೆ ವ್ಯಂಜನ ಅಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು ವ್ಯಂಜನಸಂಧಿ.


ಸಂಸ್ಕೃತ ಸ್ವರಸಂಧಿಗಳು 

ಸವರ್ಣದೀರ್ಘ ಸಂಧಿ 

- ವಿದ್ಯಾಭ್ಯಾಸ ಮಾಡು.

- ರವೀಂದ್ರನು ಹಾಡಿದನು.

- ಗುರೂಪದೇಶವನ್ನು ಪಡೆ.

ಈ ಹೇಳಿಕೆಗಳಲ್ಲಿರುವ ವಿದ್ಯಾಭ್ಯಾಸ, ರವೀಂದ್ರ, ಗುರೂಪದೇಶ ಪದಗಳನ್ನು ಗಮನಿಸಿ.

ವಿದ್ಯಾ + ಅಭ್ಯಾಸ > ವಿದ್ಯಾಭ್ಯಾಸ

ದ್ + ಯ್ + ಆ + ಅ > ದ್ + ಯ್ + ಆ

ಇಲ್ಲಿ ಪೂರ್ವಪದದ ಕೊನೆಯಲ್ಲಿರುವ -ಆ ಸ್ವರದ ಮುಂದೆ ಪರಪದದ ಆದಿಯಲ್ಲಿ ‘ಅ’- ಸ್ವರ ಇರುವುದು. ಇವೆರಡೂ ಸ್ವರಗಳು ಒಂದೇ ಸ್ಥಾನದಲ್ಲಿ ಹುಟ್ಟುವುದರಿಂದ ಇವು ಸವರ್ಣಗಳು. ಈ ಸವರ್ಣ ಸ್ವರಗಳು ಸಂಧಿಯಾದಾಗ ದೀರ್ಘಸ್ವರವಾಗಿ ಪರಿವರ್ತನೆಯಾಗುತ್ತವೆ. ಹಾಗಾಗಿ ಇದನ್ನು ಸವರ್ಣ ದೀರ್ಘ ಸಂಧಿ ಎಂದು ಕರೆಯಲಾಗಿದೆ. (ಅ, ಆ; ಇ, ಈ; ಉ, ಊ; ಇವು ಸವರ್ಣಸ್ವರಗಳು)

ಉದಾ :

ರವಿ + ಇಂದ್ರ > ರವೀಂದ್ರ

ವ್ + ಇ + ಇ > ವ್ + ಈ

ಇಲ್ಲಿ ಎರಡು ‘ಇ’ ಕಾರಗಳು ಸೇರಿ ‘ಈ’ ಕಾರವಾಗಿದೆ.

ಗುರು + ಉಪದೇಶ > ಗುರೂಪದೇಶ

ರ್ + ಉ + ಉ > ರ್ + ಊ

ಇಲ್ಲಿ ಎರಡು ‘ಉ’ ಕಾರಗಳು ಸೇರಿ ‘ಊ’ ಕಾರ ಆಗಿದೆ. 

ಹಾಗಾಗಿ ಇವು ಕೂಡಾ ಸವರ್ಣದೀರ್ಘ ಸಂಧಿಗೆ ಉದಾಹರಣೆಗಳು.

ಸೂತ್ರ : ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು.

ಉದಾ: ಸಭಾಂಗಣ, ದೇವಾಲಯ, ರವೀಶ, ವಧೂಪೇತ. 

ಗುಣಸಂಧಿ 

- ದೇವೇಂದ್ರನ ಸಭೆ.

- ಸೂರ‍್ಯೋದಯವಾಯಿತು.

_ ಮಹರ್ಷಿಯು ತಪವನ್ನು ಮಾಡುವನು.

ಇಲ್ಲಿರುವ ದೇವೇಂದ್ರ,ಸೂರ‍್ಯೋದಯ ಮತ್ತು ಮಹರ್ಷಿ ಪದಗಳನ್ನು ಗಮನಿಸಿ.

ದೇವ + ಇಂದ್ರ > ದೇವೇಂದ್ರ

ವ್ + ಅ + ಇಂ > ವ್ + ಏಂ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಇ’ ಕಾರ ಸೇರಿ ‘ಏ’ ಕಾರ ಆದೇಶವಾಗಿದೆ. 

ಸೂರ‍್ಯ+ ಉದಯ >ಸೂರ‍್ಯೋದಯ

ರ್ + ಯ್ + ಅ + ಉ > ರ್ + ಯ್ + ಓ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಉ’ ಕಾರ 

 ಸೇರಿ ‘ಓ’ ಕಾರ ಆದೇಶವಾಗಿ ಬಂದಿದೆ. 

ಮಹಾ + ಋಷಿ > ಮಹರ್ಷಿ

ಹ್ + ಆ + ಋ > ಹ್ + ಅರ್

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಆ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಋ’ ಕಾರ  ಸೇರಿ ‘ಅರ್’ ಕಾರ ಆದೇಶವಾಗಿ ಬಂದಿದೆ.

ಸೂತ್ರ : ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಕಾರವೂ ಉ ಊ ಕಾರಗಳು ಪರವಾದರೆ ‘ಓ’ ಕಾರವೂ ‘ಋ’ ಕಾರ ಪರವಾದರೆ ‘ಅರ್’ ಕಾರವೂ 

ಆದೇಶವಾಗಿ ಬಂದರೆ ಅದು ಗುಣಸಂಧಿ.

ಉದಾ: ಸುರೇಂದ್ರ, ಮಹೇಶ್ವರ, ಚಂದ್ರೋದಯ, ದೇವರ್ಷಿ.

ವೃದ್ಧಿಸಂಧಿ 

 - ಅವನು ಏಕೈಕ ವೀರ.

 - ಆಯುರ್ವೇದದಲ್ಲಿ ವನೌಷಧಗಳನ್ನು ಬಳಸುತ್ತಾರೆ.

ಇಲ್ಲಿರುವ ಏಕೈಕ ಪದವನ್ನು ಗಮನಿಸಿ.

 ಏಕ + ಏಕ > ಏಕೈಕ

 ಕ್ + ಅ + ಏ > ಕ್ + ಐ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಏ’ ಕಾರವು ಪರವಾಗಿ ಸಂಧಿಯಾದಾಗ ‘ಐ’ ಕಾರವು ಏಕಾದೇಶವಾಗಿ ಬಂದಿದೆ. 

 ವನ + ಓಷಧ > ವನೌಷಧ

 ನ್ + ಅ + ಓ > ನ್ + ಔ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಓ’ ಕಾರವು ಪರವಾಗಿ ಸಂಧಿಯಾದಾಗ ‘ಔ’ ಕಾರವು ಏಕಾದೇಶವಾಗಿ ಬಂದಿದೆ.

ಸೂತ್ರ : ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ ‘ಐ’ ಕಾರವೂ ಓ ಔ ಕಾರಗಳು ಪರವಾದಾಗ ‘ಔ’ ಕಾರವೂ ಆದೇಶವಾಗಿ ಬಂದರೆ (ಐ, ಔ ಕಾರಗಳು ಆದೇಶವಾಗಿ ಬಂದಾಗ) ಅದೇ ವೃದ್ಧಿಸಂಧಿ.

ಉದಾ : ಲೋಕೈಕ, ಜನೈಕ್ಯ, ಜಲೌಘ. 

ಯಣ್‌ಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ‘ಯಣ್’ ಎಂಬ ಸಂಜ್ಞೆಯೂ ಒಂದು. ಯ್ ರ್ ಲ್ ವ್ ಎಂಬ ನಾಲ್ಕು ವ್ಯಂಜನಗಳನ್ನು ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣ್ ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರ ಆದೇಶವಾಗಿ ಬಂದರೆ ಅದೇ ಯಣ್ ಸಂಧಿ. 

- ಅವನು ಅತ್ಯಂತ ಪರಾಕ್ರಮಿ.

_ ಯುದ್ಧದಲ್ಲಿ ಅಣ್ವಸ್ತ್ರಗಳನ್ನು ಬಳಸುತ್ತಾರೆ.

_ ಎಲ್ಲಾ ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಇರುತ್ತದೆ.

ಈ ವಾಕ್ಯದಲ್ಲಿರುವ ಅತ್ಯಂತ ಅಣ್ವಸ್ತ್ರ ಮತ್ತು ಪಿತ್ರಾರ್ಜಿತ ಎಂಬ ಪದವನ್ನು ಗಮನಿಸಿ.

ಅತಿ + ಅಂತ > ಅತ್ಯಂತ

ತ್ + ಇ + ಅಂ > ತ್ + ಯ್ + ಅಂ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಇ ಕಾರಕ್ಕೆ ಪರಪದದ ಆದಿಯಲ್ಲಿರುವ ಅ ಕಾರ ಸೇರಿ ಸಂಧಿಯಾದಾಗ ಇ ಕಾರದ ಬದಲಿಗೆ ಯ್ ಕಾರ ಆದೇಶವಾಗಿದೆ. 

ಅಣು + ಅಸ್ತ್ರ > ಅಣ್ವಸ್ತ್ರ

ಣ್ + ಉ + ಅ > ಣ್ + ಉ + ಅ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಉ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಅ’ ಕಾರ 

ಸೇರಿ ಸಂಧಿಯಾದಾಗ ‘ಉ’ ಕಾರದ ಬದಲಿಗೆ ‘ವ್’ ಕಾರ ಆದೇಶವಾಗಿದೆ.

ಪಿತೃ + ಆರ್ಜಿತ > ಪಿತ್ರಾರ್ಜಿತ

ತ್ + ಋ + ಆ > ತ್ + ರ್ + ಆ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಋ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಆ’ ಕಾರ ಸೇರಿ ಸಂಧಿಯಾದಾಗ ‘ಋ’ ಕಾರದ ಬದಲಿಗೆ ‘ರ್’ ಕಾರ ಆದೇಶವಾಗಿದೆ.

ಸೂತ್ರ : ಇ ಈ ಕಾರಗಳಿಗೆ ‘ಯ್’ ಕಾರವೂ ಉ ಊ ಕಾರಗಳಿಗೆ ‘ವ್’ ಕಾರವೂ ‘ಋ’ ಕಾರಕ್ಕೆ ‘ರ್’ ಕಾರವೂ ಆದೇಶವಾಗಿ ಬಂದರೆ ಅದು ಯಣ್ ಸಂಧಿ.

ಉದಾ: ಅತ್ಯವಸರ, ಜಾತ್ಯತೀತ, ಕೋಟ್ಯಧೀಶ, ಪ್ರತ್ಯುತ್ತರ, ಮನ್ವಾದಿ, ಮನ್ವಂತರ.

ಸಂಸ್ಕೃತ ವ್ಯಂಜನ ಸಂಧಿಗಳು :

ಜಶ್ತ್ವಸಂಧಿ 

ಸಂಸ್ಕೃತ ವ್ಯಾಕರಣದಲ್ಲಿ ವರ್ಗೀಯ ವ್ಯಂಜನದ ವರ್ಗ ತೃತೀಯಾಕ್ಷರಗಳಾದ ಗ್ ಜ್ ಡ್ ದ್ ಬ್ 

ಅಕ್ಷರಗಳನ್ನು ‘ಜಶ್’ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ಈ ಜಶ್ ಅಕ್ಷರಗಳು ಆದೇಶವಾಗಿ ಬರುವ

ಸಂಧಿಗಳೇ ಜಶ್ತ್ವ ಸಂಧಿ.

 - ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಇದೆ.

 ಈ ವಾಕ್ಯದಲ್ಲಿರುವ ಷಡಾನನ ಪದರಚನೆಯನ್ನು ಗಮನಿಸಿ

 ಷಟ್ + ಆನನ > ಷಡಾನನ

 ಟ್ + ಆ > ಡ್ + ಆ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಟ’ ಕಾರಕ್ಕೆ (ವರ್ಗದ ಪ್ರಥಮಾಕ್ಷರಕ್ಕೆ) ಪರಪದದ 

ಆದಿಯಲ್ಲಿರುವ ‘ಆ’ ಕಾರ ಪರವಾಗಿ ಸಂಧಿಯಾದಾಗ ‘ಡ್’ ಕಾರ (ಅದೇ ವರ್ಗದ ತೃತೀಯಾಕ್ಷರ ಅಂದರೆ ಜಶ್ ಅಕ್ಷರಗಳಲ್ಲಿ ಒಂದು) ಆದೇಶವಾಗಿ ಬಂದಿದೆ. 

ಸೂತ್ರ: ಪೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕ್ಕೆ ಅಂದರೆ ಕ್ ಚ್ ಟ್ ತ್ಪ್ ಪ್  ಗಳಿಗೆ ಅದೇ ವರ್ಗದ ತೃತೀಯಾಕ್ಷರಗಳು ಅಂದರೆ ಗ್ ಜ್ ಡ್ ದ್ ಬ್ ಗಳು ಅಂದರೆ ಜಶ್ ಅಕ್ಷರಗಳು ಆದೇಶವಾಗಿ ಬಂದರೆ ಅದೇ ಜಶ್ತ್ವಸಂಧಿ

ಉದಾ: ವಾಗ್ದೇವಿ, ಅಜಂತ, ಷಡಂಗ, ಚಿದಾನಂದ, ಅಬ್ಧಿ.

ಶ್ಚುತ್ವಸಂಧಿ

ಶ್ ಚ್ ಛ್ ಜ್ ಝ್ ಞ್ - ಈ ಆರು ಅಕ್ಷರಗಳನ್ನು ‘ಶು’್ಚ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ‘ಶ್ಚು’ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಶ್ಚುತ್ವ ಸಂಧಿ.

- ಮಾನವನಿಗೆ ಮನಶ್ಶುದ್ಧಿ ಇರಬೇಕು

 ಈ ವಾಕ್ಯದಲ್ಲಿರುವ ಮನಶ್ಶುದ್ಧಿ ಪದವನ್ನು ಗಮನಿಸಿ

 ಮನಸ್ + ಶುದ್ಧಿ > ಮನಶ್ಶುದ್ಧಿ

 ಸ್ + ಶ್ + ಉ > ಶ್ + ಶ್ + ಉ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಸ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಶ’ ಕಾರ ಪರವಾಗಿ 

ಸಂಧಿಯಾದಾಗ ಪೂರ್ವಪದದ ಅಂತ್ಯದ ‘ಸ’ ಕಾರಕ್ಕೆ ‘ಶ’ ಕಾರ ಆದೇಶವಾಗಿ ಬಂದಿರುವುದು. 

ಸೂತ್ರ: ಸ ಕಾರ ತ ವರ್ಗಗಳಿಗೆ ಶ ಕಾರ ಚ ವರ್ಗಗಳು ಅಂದರೆ ಶ್ಚು ಅಕ್ಷರಗಳು ಆದೇಶವಾಗಿಬಂದರೆ ಅಂತಹ ಸಂಧಿಗಳೇ ಶ್ಚುತ್ವ ಸಂಧಿ.

ಉದಾ: ಪಯಶ್ಶಯನ, ಶರಚ್ಚಂದ್ರ, ಜಗಜ್ಜ್ಯೋತಿ.

ಅನುನಾಸಿಕಸಂಧಿ

ಅನುನಾಸಿಕ ಅಕ್ಷರಗಳಾದ ಙ್ ಞ್ ಣ್ ನ್ ಮ್ ಗಳು ಆದೇಶವಾಗಿ ಬರುವ ಸಂದಿಯೇ ಅನುನಾಸಿಕ ಸಂಧಿ. 

ಉದಾ: ವಾಕ್ + ಮಯ > ವಾಙ್ಮಯ

 ಕ್ + ಮ್ + ಅ > ಙ್ + ಮ್ + ಅ

ಇಲ್ಲಿ ಪೂರ್ವಪದದ ಕೊನೆಯ ಅಕ್ಷರವಾದ ‘ಕ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಮ’ಕಾರ ಪರವಾಗಿ ಸಂಧಿಯಾದಾಗ ‘ಕ’ ಕಾರದ ಬದಲಿಗೆ ಅದೇ ವರ್ಗದ ಅನುನಾಸಿಕ ಅಕ್ಷರ ‘ಙ’ಕಾರ ಆದೇಶವಾಗಿ ಬಂದಿದೆ.

ಸೂತ್ರ : ವರ್ಗದ ಪ್ರಥಮಾಕ್ಷರಗಳಿಗೆ ಯಾವುದೇ ಅನುನಾಸಿಕ ಅಕ್ಷರಗಳು ಪರವಾದರೂ ಅವುಗಳಿಗೆ ಅಂದರೆ ವರ್ಗದ ಪ್ರಥಮಾಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು ಆದೇಶವಾಗಿಬಂದರೆ ಅದು ಅನುನಾಸಿಕ ಸಂಧಿ.

ಉದಾ: ವಾಙ್ಮಯ, ಷಣ್ಮುಖ, ಸನ್ಮಾನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ