ಪುಟಗಳು

ವ್ಯಾಕರಣ

 ನಾಮಪದ

ಹೆಸರನ್ನು ಸೂಚಿಸುವ ಪದಗಳನ್ನು ನಾಮಪದಗಳು ಎನ್ನುವರು. ನಾಮಪದದ ಮೂಲ ರೂಪಗಳಿಗೆ ‘ನಾಮಪ್ರಕೃತಿ’ ಎನ್ನುವರು.

ಉದಾ: ಮನೆಯಲ್ಲಿ (ನಾಮಪದ), ಮನೆ (ನಾಮಪ್ರಕೃತಿ) ಅಲ್ಲಿ (ಪ್ರತ್ಯಯ)

ವಸ್ತು, ವ್ಯಕ್ತಿ, ಪ್ರಾಣಿ, ಸ್ಥಳ, ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳೆಲ್ಲವನ್ನೂ ನಾಮಪದ ಎನಿಸುವವು. ನಾಮಪದಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ಅನೇಕ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

(೧) ವಸ್ತುವಾಚಕಗಳು ಅಥವಾ ನಾಮವಾಚಕ

(೨) ಗುಣವಾಚಕಗಳು

(೩) ಸಂಖ್ಯಾವಾಚಕಗಳು

(೪) ಸಂಖ್ಯೇಯವಾಚಕಗಳು

(೫) ಭಾವನಾಮಗಳು

(೬) ಪರಿಮಾಣವಾಚಕಗಳು

(೭) ಪ್ರಕಾರವಾಚಕಗಳು

(೮) ದಿಗ್ವಾಚಕಗಳು

(೯) ಸರ್ವನಾಮಗಳು

೧.ವಸ್ತುವಾಚಕಗಳು

ವಸ್ತುಗಳ ಹೆಸರನ್ನು ಹೇಳುವ ಶಬ್ದಗಳೆಲ್ಲ ವಸ್ತುವಾಚಕಗಳು.

ಉದಾಹರಣೆಗೆ:- ಚೇತನವುಳ್ಳ ವಸ್ತುಗಳು-ಮಾನವ, ಹುಡುಗಿ, ಗೌರಿ, ಮಹೇಶ, ಅಜ್ಜ, ನಾಯಿ, ಬೆಕ್ಕು, ಆನೆ ಮುಂತಾದವು.

ಚೇತನವಿಲ್ಲದ ವಸ್ತುಗಳು-ಮಣ್ಣು, ಗಿಡ, ಭೂಮಿ, ಜಲ, ಎಲೆ, ಹೂವು, ಹಣ್ಣು, ಕಾಯಿ, ಬೆಟ್ಟ, ಕಾಡು, ಶಾಲೆ ಮಠ, ಮನೆ, ಪುಸ್ತಕ-ಮುಂತಾದವು.

ವಸ್ತುವಾಚಕಗಳಲ್ಲಿ (೧) ರೂಢನಾಮ, (೨) ಅಂಕಿತನಾಮ, (೩) ಅನ್ವರ್ಥಕನಾಮ ಎಂದು ಮೂರು ವಿಧ.

(ಅ) ರೂಢನಾಮ - ರೂಢಿಯಿಂದ ಬಂದ ಸಾಮಾನ್ಯವಾಚಕಗಳೇ ರೂಢನಾಮಗಳು.

ಉದಾಹರಣೆಗೆ: ನದಿ, ಕಾಡು, ಪರ್ವತ, ಮನುಷ್ಯ, ಹೆಂಗಸು, ಹುಡುಗ, ನಗರ, ದೇಶ-ಇತ್ಯಾದಿಗಳು.

ಇಲ್ಲಿ ಬಂದಿರುವ ನದಿ, ಕಾಡು ಇತ್ಯಾದಿ ಶಬ್ದಗಳು ಎಲ್ಲ ನದಿಗಳಿಗೂ ಎಲ್ಲ ಕಾಡಿಗೂ ಅನ್ವಯಿಸುವ ಸಾಮಾನ್ಯವಾಚಕಗಳು.

(ಆ) ಅಂಕಿತನಾಮ - ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೇ ಅಂಕಿತ ನಾಮಗಳು. 

ಅಂದರೆ ರೂಢನಾಮಗಳಿಗೆ ಇಟ್ಟ ಹೆಸರುಗಳು.

ಉದಾಹರಣೆಗೆ:-ಗಂಗಾ, ಗೋದಾವರಿ, ಗೋಮತಿ, ಕಾವೇರಿ, ಹಿಮಾಲಯ, ಸಹ್ಯಾದ್ರಿ, ಶಂಕರ, ರಂಗ, ಭೀಮ, ಸಾವಿತ್ರಿ, ಧಾರವಾಡ, ಭಾರತ, ಕರ್ನಾಟಕ, ಆಲ, ಬೇವು, ಮಾವು-ಇತ್ಯಾದಿಗಳು.

(ಇ) ಅನ್ವರ್ಥಕನಾಮ : ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೇ ಅನ್ವರ್ಥಕನಾಮಗಳು.

ಉದಾಹರಣೆಗೆ:-ಕುಂಟ, ಹೆಳವ, ಕಿವುಡ, ವಿಜ್ಞಾನಿ, ವ್ಯಾಪಾರಿ, ವಿದ್ವಾಂಸ, ಶಿಕ್ಷಕ, ರೋಗಿ, ವೈದ್ಯ, ಯೋಗಿ-ಇತ್ಯಾದಿಗಳು.

(೧) ಗುಣವಾಚಕ : ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕ ಎನಿಸುವುವು.

ಉದಾಹರಣೆಗೆ:-ದೊಡ್ಡ, ಕಿರಿದು, ಹಳೆಯ, ಕೆಟ್ಟದು, ಬಿಳಿದು, ಹಿರಿದು -ಇತ್ಯಾದಿ.

(೨) ಸಂಖ್ಯಾವಾಚಕ : ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲ ಸಂಖ್ಯಾವಾಚಕಗಳು. 

ಉದಾಹರಣೆಗೆ:- ಎರಡು, ಹತ್ತು, ನೂರು, ಸಾವಿರ, ಲಕ್ಷ, ಕೋಟಿ ಮೂವರು -ಇತ್ಯಾದಿ.

(೩) ಸಂಖ್ಯೇಯವಾಚಕ : ಸಂಖ್ಯೆಯಿಂದ ಕೂಡಿದ ಶಬ್ದಗಳೇ ಸಂಖ್ಯೇಯವಾಚಕಗಳು. 

ಉದಾಹರಣೆಗೆ:- ಮೂರನೆಯ, ಇಮ್ಮಡಿ, ಪಂಚಾಮೃತ -ಇತ್ಯಾದಿ.

(೪) ಭಾವನಾಮ : ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳೆಲ್ಲ ಭಾವನಾಮಗಳು.

ಉದಾಹರಣೆಗೆ:- ಆಟ, ನೋಟ, ಕರ್ಪು, ಕೆಂಪು, ಪೆಂಪು -ಇತ್ಯಾದಿ.

(೫) ಪರಿಮಾಣವಾಚಕ : ಸಾಮಾನ್ಯ ಅಳತೆ, ಪರಿಮಾಣ, ಗಾತ್ರ -ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳು. 

ಉದಾಹರಣೆಗೆ:-ಹಲವು, ಕೆಲವು, ಅನಿತು, ಇನಿತು, ಅಷ್ಟು, ಇಷ್ಟು, ಎನಿತು, ಪಲವು -ಇತ್ಯಾದಿ.

(೬) ಪ್ರಕಾರವಾಚಕ : ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳು. 

ಇವೂ ಒಂದು ರೀತಿಯ ಗುಣವಾಚಕಗಳೇ ಆಗಿವೆ.

ಉದಾಹರಣೆಗೆ:- ಎಂತಹ, ಎಂಥ, ಇಂಥ, ಇಂಥದು, ಅಂಥ, ಅಂತಹುದು, ಇಂತಹುದು, ಅಂಥವನು, ಅಂಥವಳು, ಅಂಥದು, ಅಂತಹವನು, ಇಂತಹವನು -ಇತ್ಯಾದಿ. 

(೭) ದಿಗ್ವಾಚಕ : ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳು.

ಉದಾಹರಣೆಗೆ:- ಆಚೆ, ಈಚೆ ಉತ್ತರ, ಬಡಗಲು, ಬಡಗಣ, ದಕ್ಷಿಣ, ತೆಂಕಲು, ತೆಂಕಣ, ಪೂರ್ವ, ಮೂಡಲು, ಮೂಡಣ, ಪಶ್ಚಿಮ, ಪಡುವಲು, ಪಡುವಣ, ಈಶಾನ್ಯ, ವಾಯವ್ಯ, ಆಗ್ನೇಯ, ನೈಋತ್ಯ -ಇತ್ಯಾದಿ.

(೮) ಸರ್ವನಾಮ : ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವುಗಳನ್ನು ಸೂಚಿಸುವ 

(ಬೋಧಿಸುವ) ಶಬ್ದಗಳೇ ಸರ್ವನಾಮಗಳು.

ಸರ್ವನಾಮಗಳಲ್ಲಿ ಮೂರು ವಿಧ

(೧) ಪುರುಷಾರ್ಥಕ ಸರ್ವನಾಮಗಳು.

(೨) ಪ್ರಶ್ನಾರ್ಥಕ ಸರ್ವನಾಮಗಳು.

(೩) ಆತ್ಮಾರ್ಥಕ ಸರ್ವನಾಮಗಳು.

೧. ಪುರುಷಾರ್ಥಕ ಸರ್ವನಾಮಗಳು: ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ

ಕ್ರಮ ಸಂಖ್ಯೆ  |ಪುರುಷಾರ್ಥಕಗಳು    |ಏಕವಚನ            |ಬಹುವಚನ

೧                 |ಉತ್ತಮ ಪುರುಷ        |ಸರ್ವನಾಮಗಳು   |ನಾನು ನಾವು

೨                 |ಮಧ್ಯಮ ಪುರುಷ       |ಸರ್ವನಾಮಗಳು   |ನೀನು ನೀವು

೩                 |ಪ್ರಥಮ ಪುರುಷ         |ಸರ್ವನಾಮಗಳು   |ಅವನು, ಅವಳು,ಅದು. ಅವರು, ಅವು|

೨. ಪ್ರಶ್ನಾರ್ಥಕ ಸರ್ವನಾಮಗಳು: ಪ್ರಶ್ನೆಗೆ ಸಂಬಂಧಿಸಿದ ಶಬ್ದಗಳು ಹಾಗೂ ಹೆಸರುಗಳು

ಉದಾಹರಣೆಗೆ:- ಯಾವುದು? ಯಾರು? ಏನು? ಏತರದು? ಆವುದು? ಏನ್? ಇತ್ಯಾದಿ.

೩. ಆತ್ಮಾರ್ಥಕ ಸರ್ವನಾಮಗಳು

ಉದಾಹರಣೆಗೆ:- ತಾನು, ತಾವು ತನ್ನ, ತಮ್ಮ.

ಲಿಂಗಗಳು

ಲಿಂಗವೆನ್ನುವುದರ ಮೂಲ ಅರ್ಥ ಲಕ್ಷಣ ಮತ್ತು ಗುರುತು. ಕನ್ನಡ ಭಾಷೆಯಲ್ಲಿ ಸ್ವಭಾವಕ್ಕನುಗುಣವಾಗಿ 

ಲಿಂಗವ್ಯವಸ್ಥೆ ಇದೆ. ಅವುಗಳಲ್ಲಿ ಮುಖ್ಯವಾಗಿ ೩ ವಿಧಗಳಿವೆ.

೧) ಪುಲ್ಲಿಂಗ ೨) ಸ್ತ್ರೀಲಿಂಗ ೩) ನಪುಂಸಕಲಿಂಗ

೧) ಪುಲ್ಲಿಂಗ : ಮನುಷ್ಯ ಸಂಬಂಧಿ ಪದಗಳಲ್ಲಿ ‘ಗಂಡು’ ಎಂಬರ್ಥವನ್ನು ಸೂಚಿಸುವ ಶಬ್ದಗಳು ‘ಪುಲ್ಲಿಂಗ’ ವೆನಿಸುತ್ತವೆ.

ಉದಾ : ಸುಯೇಶ, ಪಂಡಿತ, ರಹಿಮ, ಭೀಮ, ಜಾನ್, ಕವಿ, ಶಿಕ್ಷಕ, ಹುಡುಗ ಇತ್ಯಾದಿ.

೨) ಸ್ತ್ರೀಲಿಂಗ : ಮನುಷ್ಯ ಸಂಬಂಧಿ ಪದಗಳಲ್ಲಿ ‘ಹೆಣ್ಣು’ ಎಂಬರ್ಥವನ್ನು ಸೂಚಿಸುವ ಶಬ್ದಗಳು ‘ಸ್ತ್ರೀಲಿಂಗ’ ವೆನಿಸುತ್ತವೆ.

ಉದಾ : ರಾಣಿ, ಗಂಗೆ, ತಾಯಿ, ಫಾತಿಮಾ, ಹುಡುಗಿ, ಕವಯಿತ್ರಿ ಇತ್ಯಾದಿ.

೩) ನಪುಂಸಕಲಿಂಗ : ಮನುಷ್ಯರಲ್ಲಿ ಸ್ಪಷ್ಟವಾಗಿ `ಗಂಡು’ ಅಥವಾ `ಹೆಣ್ಣು’ ಎಂದು ಸೂಚಿಸುವ ಶಬ್ದಗಳನ್ನು ಹೊರತುಪಡಿಸಿದ ಎಲ್ಲ ಶಬ್ದಗಳನ್ನು ನಪುಂಸಕಲಿಂಗ ಎನ್ನುವರು. ಪ್ರಾಣಿಗಳ ಹೆಸರುಗಳು ಸ್ಪಷ್ಟವಾಗಿ ‘ಗಂಡು’ ಅಥವಾ ‘ಹೆಣ್ಣು’ ಎಂದು ಸೂಚಿತವಾದರೂ ಅವನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗ ಎಂದು ಪರಿಗಣಿಸದೆ ನಪುಂಸಕಲಿಂಗ ಎಂದೇ ಪರಿಗಣಿಸಬೇಕು.

ಉದಾ : ಮಗು, ಕರು, ಪ್ರಾಣಿ, ಕಲ್ಲು, ಜನ, ಕೋಣ, ಆಕಳು ಇತ್ಯಾದಿ. 

ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನು ನಪುಂಸಕ ಲಿಂಗವೆಂದೇ ಪರಿಗಣಿಸಲಾಗುವುದು.

ವಚನಗಳು

ವಚನ ಎಂದರೆ ಸಂಖ್ಯೆಯನ್ನು ಸೂಚಿಸುವ ಪದ ಕನ್ನಡದಲ್ಲಿ ಎರಡು ರೀತಿಯ ವಚನಗಳಿವೆ. 

೧) ಏಕವಚನ ೨) ಬಹುವಚನ

ಏಕವಚನ : ಒಂದು ವಸ್ತುವನ್ನು ಹೇಳುವ ಪದಕ್ಕೆ ‘ಏಕವಚನ’ ಎನ್ನುವರು.

ಉದಾ : ಹುಡುಗ, ಶಾಲೆ, ಮಗು, ಹುಡುಗಿ, ಗಿಡ, ಪ್ರಾಣಿ

ಬಹುವಚನ : ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳನ್ನು ಸೂಚಿಸುವ ಪದವನ್ನು ‘ಬಹುವಚನ’ ಎನ್ನುವರು.

ಉದಾ : ಹುಡುಗರು, ಶಾಲೆಗಳು, ಮಕ್ಕಳು, ಹುಡುಗಿಯರು, ಗಿಡಗಳು, ಪ್ರಾಣಿಗಳು

ವಿಭಕ್ತಿ ಪ್ರತ್ಯಯಗಳು

ನಾಮ ಪ್ರಕೃತಿಗಳ ಮುಂದೆ ಸೇರಿಕೊಂಡು ಬೇರೆ ಬೇರೆ ಸಂಬಂಧಗಳ ಅರ್ಥ ಉಂಟು ಮಾಡುವ ಪ್ರತ್ಯಯಗಳಿಗೆ ವಿಭಕ್ತಿ ಪ್ರತ್ಯಯಗಳು ಎಂದು ಹೆಸರು. ಇವುಗಳಿಗೆ ಕಾರಕಗಳು ಎಂದೂ ಹೆಸರಿದೆ. ಇವು ಸಂಬಂಧಕಾರಕಗಳು. ಅದಕ್ಕೇ ಈ ಹೆಸರು.

ಏಳು ವಿಭಕ್ತಿಗಳಿವೆ. ಹಾಗೆಯೇ ಅವುಗಳಿಗೆ ಏಳು ಪ್ರತ್ಯಯಗಳಿವೆ.

      ವಿಭಕ್ತಿಯ ಹೆಸರು    |ಕಾರಕಗಳು|  ವಿಭಕ್ತಿ ಪ್ರತ್ಯಯಗಳು         ಉದಾಹರಣೆ

೧.    ಪ್ರಥಮಾ ವಿಭಕ್ತಿ       ಕರ್ತ್ರರ್ಥ     ಉ                            ಮರ+ಉ = ಮರವು

೨.    ದ್ವಿತೀಯಾ ವಿಭಕ್ತಿ      ಕರ್ಮಾರ್ಥ

  ಅನ್ನು                        ಮರ+ಅನ್ನು = ಮರವನ್ನು

೩.    ತೃತೀಯಾ ವಿಭಕ್ತಿ      ಕರಣಾರ್ಥ  ಇಂದ                        ಮರ+ಇಂದ = ಮರದಿಂದ

೪.    ಚತುರ್ಥೀ ವಿಭಕ್ತಿ     ಸಂಪ್ರದಾನ  ಗೆ/ಕೆ/ಇಗೆ/ಕ್ಕೆ                ಮರ+ಕ್ಕೆ = ಮರಕ್ಕೆ ಮನೆಗೆ, ಹೆಸರಿಗೆ, ಅದಕ್ಕೆ

೫.   ಪಂಚಮೀ ವಿಭಕ್ತಿ    ಅಪಾದಾನ  ದೆಸೆಯಿಂದ             ಮರ+ದೆಸೆಯಿಂದ=ಮರದ  ದೆಸೆಯಿಂದ

೬.   ಷಷ್ಠೀ ವಿಭಕ್ತಿ                ಸಂಬಂಧ     ಅ                            ಮರ+ಅ = ಮರದ

೭.    ಸಪ್ತಮೀ ವಿಭಕ್ತಿ            ಅಧಿಕರಣ   ಅಲ್ಲಿ                      ಮರ+ಅಲ್ಲಿ = ಮರದಲ್ಲಿ

೮. ಸಂಬೋಧನಾ            ಕರೆಯುವಿಕೆ    ಅ, ಇರಾ, ಆ, ಏ, ಈ   


ಗಮನಿಸಿ: ಹೊಸಗನ್ನಡದಲ್ಲಿ ಪ್ರಥಮಾ ವಿಭಕ್ತಿಯನ್ನು ಬಿಟ್ಟು ಬಳಸುವ ಪರಿಪಾಟವಿದೆ. 

ಉದಾ: ಹುಡುಗನು ಬಂದನು ಎಂಬುದಕ್ಕೆ ಹುಡುಗ ಬಂದನು ಎಂದೂ ಬಳಸುವರು. ಅದೇ ರೀತಿ 

ಪಂಚಮೀ ವಿಭಕ್ತಿಯ ಬದಲು ತೃತೀಯಾ ವಿಭಕ್ತಿಯನ್ನೇ ಬಳಸುವರು. 

ಉದಾ: ‘ಮರದ ದೆಸೆಯಿಂದ’ ಎಂಬುದನ್ನು ‘ಮರದಿಂದ’ ಎಂದು ಬಳಸುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ